ಮಾಂಡಲೆ	-	ಬರ್ಮಾದೇಶದ ಒಂದು ವಿಭಾಗ, ಜಿಲ್ಲೆ ಹಾಗೂ ಒಂದು ಮಹಾನಗರ.
ಜಿಲ್ಲೆ: ಬರ್ಮಾದ ಕೇಂದ್ರಸ್ಥಾನದಲ್ಲಿ ಇರವಾಡಿ ನದಿಯ ಪೂರ್ವ ಭಾಗಕ್ಕಿದ್ದು ಸುಮಾರು 5473 ಚಕಿಮೀ. ವಿಸ್ತೀರ್ಣವಿದೆ. ಇಲ್ಲಿಯ ಇರವಾಡಿ ಮಧ್ಯಕಣಿವೆಯ ಪ್ರದೇಶದಲ್ಲಿ ಬತ್ತ, ಹುರುಳಿ ಮತ್ತು ಹಣ್ಣುಗಳನ್ನು ಬೆಳೆಯುತ್ತಾರೆ. ಜಿಲ್ಲೆಯ ಆಗ್ನೇಯ ದಿಕ್ಕಿನಲ್ಲಿ ಬೆಟ್ಟಗಳು. ಪೀಠಭೂಮಿ ಹಾಗೂ ಪ್ರಸಿದ್ಧವಾದ ಶಾನ್ ಪ್ರಸ್ಥಭೂಮಿಯಿದೆ. ಇದು ಬೆಟ್ಟ ಕಾಡುಗಳಿಂದ ಕೂಡಿದ್ದು ಮಾಂಟಗಿ ಮತ್ತು ಮಾಂಗ್ವಿ ನದಿ ಜಲ ಸಂಪರ್ಕ ಹೊಂದಿದೆ. ಶಾಗಿನಿ ಬೆಟ್ಟ ಪ್ರದೇಶದಲ್ಲಿ ಬುದ್ಧನ ಸುಂದರ ಶಿಲಾ ವಿಗ್ರಹಗಳ ಕೆತ್ತನೆ ಕೆಲಸ ನಡೆಯುತ್ತದೆ. ಜಿಲ್ಲೆಯ ಮೈದಾನ ಭಾಗ ಪ್ರಮುಖ ಕೈಗಾರಿಕಾ ಪ್ರದೇಶ. ಮಿನ್‍ಜಾನ್‍ನಲ್ಲಿ ಸುಮಾರು 70 ಟನ್‍ಗಳಷ್ಟು ತೂಕವುಳ್ಳ ದೊಡ್ಡದಾದ ಗಂಟೆಯಿದೆ.

ಮಾಂಡಲೆ ವಿಭಾಗ 34,553 ಚಕಿಮೀ ವಿಸ್ತೀರ್ಣವಿದೆ. ಈ ವಿಭಾಗ ಮಾಂಡಲೆ, ಕ್ಯಾಕಶಿ, ಮಿಕಿಟಿಲಾ, ಮಾನ್‍ಗಿನ್ ಮತ್ತು ಎಮೆಟಲಿ ಜಿಲ್ಲೆಗಳನ್ನು ಒಳಗೊಂಡಿದೆ. 

ನಗರ: ಇರವಾಡಿ ನದಿ ದಂಡೆಯ ಮೇಲೆ ರಂಗೂನಿನ ಉತ್ತರಕ್ಕೆ 563 ಕಿಮೀ ದೂರದಲ್ಲಿದೆ. ಉತ್ತರ ಅಕ್ಷಾಂಶ 21058' ಮತ್ತು ಪೂರ್ವ ರೇಖಾಂಶ 9608' ದಲ್ಲಿದೆ. ಜನಸಂಖ್ಯೆ 4,72,512 (1979). ನಗರ ಸಮುದ್ರಮಟ್ಟದಿಂದ ಸುಮಾರು 95ಮೀಟರ್ ಎತ್ತರದಲ್ಲಿದೆ. ಮಾಂಡೆಲೆ ಮಧ್ಯ ಬರ್ಮಾದ ಶುಷ್ಕ ಪ್ರದೇಶದಲ್ಲಿದ್ದು ರಂಗೂನಿನೊಡನೆ ರಸ್ತೆ, ರೈಲು ಹಾಗೂ ಜಲ ಸಂಪರ್ಕಗಳನ್ನು ಹೊಂದಿದೆ. ಈ ನಗರ ಬರ್ಮಾದೇಶದ ರಾಜಧಾನಿಯಾಗಿದ್ದು 1885ರಲ್ಲಿ ಬ್ರಿಟಿಷರ ಕೈವಶವಾಯಿತು. ಇಲ್ಲಿ ಬೌದ್ಧೇಯರು ಅಧಿಕಸಂಖ್ಯೆಯಲ್ಲಿ ನೆಲಸಿದ್ದಾರೆ. ಈ ನಗರ ಬೌದ್ಧಧರ್ಮದ ಮುಖ್ಯ ಕೇಂದ್ರವಾಗಿದ್ದು ಬೌದ್ಧ ಭಿಕ್ಷುಕರ ತವರು ಮನೆಯಾಗಿದೆ. ನಗರದ ಈಶಾನ್ಯಭಾಗದ ಬೆಟ್ಟ ಪ್ರದೇಶ ನದಿಯ ಹತ್ತಿರದಲ್ಲಿದ್ದು ಇತ್ತೀಚೆಗೆ ನಿರ್ಮಿಸಿದ ಪಗೋಡ ಹಾಗೂ ಸ್ಮಾರಕ ಕಟ್ಟಡಗಳಿಂದ ಕೂಡಿದೆ. ಬೆಟ್ಟದ ತಳಭಾಗದಲ್ಲಿ ಸುಮಾರು 730 ಪಗೋಡಗಳಿವೆ. ಇಲ್ಲಿಯ ಸುಪ್ರಸಿದ್ಧ ಪಗೋಡವೆಂದರೆ ದಕ್ಷಿಣ ಭಾಗದಲ್ಲಿರುವ ಮಹಮ್ಮಿಯ ಮನಿ ಅಥವಾ ಅರೇಖಾನ್ ಪಗೋಡ. ಇದರಲ್ಲಿ 3.65 ಮೀಟರ್ ಎತ್ತರದ ತಾಮ್ರದ ಬುದ್ಧನ ಪ್ರತಿಮೆ ಅತ್ಯಂತ ಪ್ರಾಚೀನವಾದುದು. ನಗರದ ಅರಮನೆಯ ಪಶ್ಚಿಮಕ್ಕಿರುವ ಮಾರುಕಟ್ಟೆ ಜೈಗಿಯ ಬಜಾರ್ ಎಂದು ಪ್ರಸಿದ್ಧ. ಇಲ್ಲಿಗೆ ದೇಶದ ಎಲ್ಲ ಭಾಗದ ಜನರು ಬರುತ್ತಿರುತ್ತಾರೆ. ಈ ನಗರ ಬರ್ಮಾದ ಕೈಗಾರಿಕಾ ಕೇಂದ್ರ. ಇಲ್ಲಿಯ ಮುಖ್ಯ ಕೈಗಾರಿಕೆಗಳೆಂದರೆ ರೇಷ್ಮೆನೂಲುವುದು, ಬೆಲೆಬಾಳುವಹರಳುಕಲ್ಲುಗಳ ತಯಾರಿಕೆ, ಬೆಂಕಿಪೊಟ್ಟಣ, ಮರಗೆಲಸ, ಚಿನ್ನ ಬೆಳ್ಳಿ ಒಡವೆವಸ್ತುಗಳ ತಯಾರಿಕೆ. ಈ ನಗರ ದಕ್ಷಿಣದ ರಂಗೂನ್, ಉತ್ತರದ ಮಿಟಿಕೆನಾ ಮತ್ತು ಲಾಶಿಯಾ ಹಾಗೂ ಚೀನದ ಗಡಿಯವರೆಗೆ ರೈಲು ಮತ್ತು ವಿಮಾನ ಸಂಚಾರ-ಸಂಪರ್ಕ ಹೊಂದಿದೆ. ಇದರ ಸುತ್ತಲೂ ಹಾವಾ, ಅಮರಪುರ (ಹಿಂದಿನ ರಾಜಧಾನಿ), ನಯಾಗಾರಿ ಮುಂತಾದ ಉಪನಗರಗಳು ಬೆಳೆದಿವೆ. ಇಲ್ಲಿರುವ ವಿಶ್ವವಿದ್ಯಾಲಯಗಳು 1958ರಲ್ಲಿ ಸ್ವಾಧಿಕಾರ ಪಡೆದುವು. ಇಲ್ಲಿ ಅನೇಕ ವಿದ್ಯಾಸಂಸ್ಥೆಗಳಿದ್ದು ಶಿಕ್ಷಣ, ತರಬೇತಿ, ಕೃಷಿ ಕೈಗಾರಿಕಾ ಸಂಸ್ಥೆಗಳು, ಕರಕುಶಲ, ಸಂಗೀತ, ನೃತ್ಯಶಾಲೆಗಳನ್ನು ಹೊಂದಿವೆ. ಇಲ್ಲಿಯ ಸುಭಿಕ್ಷತೆ, ಪ್ರಶಾಂತತೆ ಮತ್ತು ನೈರ್ಮಲ್ಯಗಳಿಂದಾಗಿ ಇದನ್ನು ಚಿನ್ನದ ನಗರವೆಂದು ಕರೆಯಲಾಗುತ್ತಿತ್ತು. ಇದರ ನಿರ್ಮಾಣ 1857ರಲ್ಲಿ ಪ್ರಾರಂಭಿಸಲ್ಪಟ್ಟು 1860ರಲ್ಲಿ ಮುಕ್ತಾಯವಾಯಿತು. ಮಹಮ್ಮದೀಯರುಗಳು. ಹಿಂದೂಗಳು, ಯಹೂದಿ, ಶಾನರು, ಚೀನೀಯರು, ಮಾನೇಪುರಿಭಗರು ಕಂಡುಬರುವರು. ಈ ನಗರ ಬರ್ಮೀಯರ ಸಂಸ್ಕøತಿಯನ್ನು ಇಂದಿಗೂ ಪ್ರತಿಬಿಂಬಿಸುವುದು. ಮಾಂಡೆಯಾನ್ ನದಿ ಮಾಂಡಲೆಯಿಂದ 40 ಕಿಮೀ ದೂರದಲ್ಲಿ ಹರಿಯುವುದು. ನೌಕಾಯಾನದ ಸೌಲಭ್ಯವಿದ್ದು ಈ ನಗರ ಹೆಚ್ಚು ಅಭಿವೃದ್ಧಿ ಹೊಂದಲು ಕಾರಣವಾಗಿದೆ. ಬ್ರಿಟಿಷರ ಕೈವಶವಾಗುವ ತನಕ (1860-65) ಬರ್ಮಾದೇಶದ ರಾಜಧಾನಿಯಾಗಿತ್ತು. ಬ್ರಿಟಿಷರ ಆಕ್ರಮಣದ ಬಳಿಕ ರಾಜಧಾನಿಯನ್ನು ಮಾಂಡಲೆಯಿಂದ ರಂಗೂನಿಗೆ ವರ್ಗಾಯಿಸಲಾಯಿತು. ಎರಡನೆಯ ಮಹಾಯುದ್ಧದ ಸಂದರ್ಭದಲ್ಲಿ ಜಪಾನೀಯರ ಆಕ್ರಮಣಕ್ಕೆ ತುತ್ತಾಗಿ ಈ ನಗರ ಬಲುಪಾಲು ನಾಶವಾಡಲ್ಪಟ್ಟಿದ್ದು ಈಗ ಪುನರ್‍ನಿರ್ಮಾಣ ಮಾಡಲಾಗಿದೆ. 				 
(ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ